ಬೆಂಗಳೂರಿನಿಂದ ಸುಮಾರು 60 ಕಿ.ಮೀ ದೂರದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಣ್ಮನ ಸೆಳೆಯುವ ನಂದಿ ಬೆಟ್ಟವನ್ನು ಕಾಣಬಹುದು.
ಈ ಗಿರಿಧಾಮವು ಸಮುದ್ರ ಮಟ್ಟದಿಂದ ಸುಮಾರು 4800 ಅಡಿ ಎತ್ತರವಿದ್ದು ಉತ್ತರ ಪಾಲಾರ್, ದಕ್ಷಿಣ ಪೆನ್ನಾರ್, ಚಿತ್ರಾವತಿ, ಅರ್ಕಾವತಿ ಮತ್ತು ಪಾಪಾಗ್ನಿ ನದಿಗಳ ಜನ್ಮಸ್ಥಾನವಾಗಿದೆ. ಇಲ್ಲಿ ನಾವು ಯೋಗನಂದೀಶ್ವರ ದೇವಾಲಯವನ್ನು ಹಾಗೂ ಹತ್ತಿರದ ನಂದಿ ಗ್ರಾಮದಲ್ಲಿ ಭೋಗನಂದೀಶ್ವರ ದೇವಾಲಯವನ್ನು ಕಾಣಬಹದು.ಇಲ್ಲಿ ನೀರಿನ ಸಂಗ್ರಹಣೆಗಾಗಿ ಒಂದು ಆಯತಾಕಾರದ ಕಲ್ಯಾಣಿಯನ್ನು ದೇವಾಲಯದ ಮುಂದೆ ರಚಿಸಲಾಗಿದೆ.
ನಂದಿ ಗಿರಿ ಎಂದೂ ಸಹ ಕರಿಯಲ್ಪಡುವ ಈ ಗಿರಿಧಾಮದಲ್ಲಿನ ಕೋಟೆಯ ಗೋಡೆಗಳನ್ನು ಚಿಕ್ಕಬಳ್ಳಾಪುರದ ಪಾಳೇಗಾರರು ನಿರ್ಮಿಸಲಾಗಿದ್ದು ನಂತರ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಅವರು ಇದನ್ನು ಇನ್ನೂ ಭದ್ರಗೊಳಿಸಿದರು ಎಂದು ನಂಬಲಾಗಿದೆ. ಟಿಪ್ಪು ಸುಲ್ತಾನನು ಈ ಕೋಟೆಯನ್ನು ತನ್ನ ಬೇಸಿಗೆಯ ತಂಗುದಾಣವಾಗಿಸಿಕೊಂಡಿದ್ದನು. ಹಾಗೆಯೇ ಇಲ್ಲಿಯ ಪ್ರಪಾತಕ್ಕೆ“ಟಿಪ್ಪು ಡ್ರಾಪ್”ಎಂಬ ಹೆಸರು ಇದೆ, ಇಲ್ಲಿ ಮರಣದಂಡನೆಗೋಳಗಾದ ಖೈದಿಗಳನ್ನು ತಳ್ಳಲಾಗುತ್ತಿತ್ತು ಎಂಬ ಇತಿಹಾಸವಿದೆ.
ವಾರಪೂರ್ತಿ ದುಡಿದು ಬೇಸತ್ತ ಜನರು ಉತ್ತಮವಾದ ಸಮಯವನ್ನು ಕಳೆಯನ್ನು ಹಾಗೂ ಅಹಲ್ಲಾದಕರವಾದ ಸೂರ್ಯೋದಯವನ್ನು ಕಾಣಲು ಬರುವ ವಾರಾಂತ್ಯದ ಜನಪ್ರಿಯ ತಾಣವಾಗಿದೆ. ಪ್ಯಾರಾಗ್ಲೈಡಿಂಗ್ ಮತ್ತು ಟ್ರೆಕ್ಕಿಂಗ್ ಮಾಡುವವರನ್ನೂ ಸಹ ಈ ಪ್ರದೇಶವು ಆಕರ್ಷಿಸುತ್ತದೆ.
ಹಾಗೆಯೇ ಹತ್ತಿರದಲ್ಲಿರುವ ಮುದ್ದೇನಹಳ್ಳಿ ಗ್ರಾಮದಲ್ಲಿ ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ ನವರ ಮನೆಯನ್ನು ವಸ್ತುಸಂಗ್ರಾಹಲಯವನ್ನಾಗಿ ಮಾಡಲಾಗಿದೆ. ಅಲ್ಲಿಗೂ ಸಹ ಭೇಟಿ ನೀಡಬಹುದು.
Comments