ಬೇಸಿಗೆ, ಚಳಿ, ಮಳೆ
ಋತುಗಳು ಬದಲಾದವು
ನೀ ಕೊಟ್ಟ ಭರವಸೆಗಳ ನಾ ಬಿಗಿಯಾಗಿ ಹಿಡಿದು ನಿಂತೆ
ಮನಸ್ಸಿನ ನೋವಿಗೆ ನೆನಪುಗಳು ಸಾಲವಾದವು
ನೀಲಿ ಆಕಾಶದಲ್ಲೂ ಚಂದ್ರ ಮತ್ತೆ ಕಾಣಿಸಿಕೊಂಡನು
ಆದರೂ ನೀ ಇನ್ನೂ ಬರಲಿಲ್ಲ!
ನಿನ್ನ ನಿರೀಕ್ಷೆಯಲ್ಲಿ ನನ್ನ ಕಣ್ಣುಗಳೂ ಕೆಂಪಾದವು
ಹೃದಯದ ಭಾರ ಹೆಚ್ಚಾದಂತಾಯಿತು
ದಿನಗಳು ವರ್ಷಗಳಂತೆ ಕಾಣತೊಡಗಿತು
ಅಂಗೈಯ್ಯ ರೇಖೆಗಳೂ ತಮ್ಮ ದಾರಿ ಕಳೆದುಕೊಂಡಂತೆನಿಸಿತು
ಆದರೂ ನೀ ಇನ್ನೂ ಬರಲಿಲ್ಲ!
ಸೂರ್ಯ ಮುಳುಗಿದ ,ಇಂದು ನಮ್ಮ ರಹಸ್ಯಗಳೊಂದಿಗೆ
ಬೀಸಿತು ತಂಗಾಳಿ , ಅಂಗಳಕ್ಕೆ ಎಲೆಗಳ ಅಲಂಕಾರ ,
ಗಾಳಿಯೂ ಕಿಟಕಿ ತೆಗೆದು ಮನೆ ಪ್ರವೇಶಿಸಿತು
ಆದರೂ ನೀ ಇನ್ನೂ ಬರಲಿಲ್ಲ!
ಆಗ ಸಮಯವೂ ಆದ್ಭುತವಾದ ಆಟ ಆಡತೊಡಗಿತು,
ನೋವಿಗೂ ದುಃಖವನ್ನು ನೋಡಿ ನೋಡಿ ಸಾಕಾಯಿತು
ಬಿದ್ದರೂ ಮತ್ತೆ ಎದ್ದೇಳುವುದನ್ನು ಕಲಿತೆ
ಆದರೆ ಇದ್ದಕ್ಕಿದಂತೆ ಒಂದು ದಿನ ನೀ ಬಂದೆ
ನಿಶಬ್ಧವಾದ ರಾತ್ರಿಯೂ ನಿನ್ನ ಆಗಮನವ ಅರಿಯಿತು
ಕನ್ನಡಿಯೂ ಸಿಂಗರಿಸಿಕೋ ಎಂದು ಕೂಗಿ ಕೂಗಿ ಕರಿಯಿತು
ಹೃದಯವೂ ತನ್ನ ಮಿಡಿತದ ತಾಳ ಮರೆತಂತಾಯಿತು
ಈ ಬಾರಿ ಅದ್ಯಾವ ಸುನಾಮಿ ನಿನ್ನೊಂದಿಗೆ ತಂದಿರುವೆಯೋ
ಇಲ್ಲಿವರೆಗೂ ಬಂದಮೇಲೆ ಮನೆಗೆ ಬರ್ತಿಯಾ ಅಲಾ?
ಸೋತು ಸುಸ್ತಾಗಿರುವ ಕಣ್ಣುಗಳಿಗೆ ಕಾಡಿಗೆ ಹಚ್ಚಿ ನಿಂತೆ
ಮತೊಮ್ಮೆ ನೀನು ಈ ಕಣ್ಣಿನಲ್ಲಿ ಕಣ್ಣಿಟ್ಟು ಅಂದಿನಂತೆ ನೋಡುತ್ತೀಯ ಎಂಬ ಬಯಕೆಯಿಂದ
ನಿನ್ನನ್ನು ಕಂಡಾಗ ಹೇಳಲು ನೂರಾರು ಕಥೆಗಳು ತಲೆಯಲ್ಲಿದ್ದವು
ನಾ ಹೇಳುತ್ತಾ , ನೀ ಕೇಳುತ್ತಾ
ಸಿಟ್ಟು ಬಂದಲ್ಲಿ ಕೂಗಾಡಿ ,ಕಿರ್ಚಾಡಿ
ಮತ್ತೆ ಸುಸ್ತಾದಾಗ ನಿನ್ನ ಮಡಿಯಲ್ಲಿ ಮಲಗುತ್ತಾ
ಸಮಾಧಾನವ ಕಾಣುವುದು
ಈಗ ನೀ ನನ್ನ ಮುಂದೆ ನಿಂತಿರುವೆ
ಪದಗಳು ನನ್ನಿಂದ ದೂರ
ಕಣ್ಣಲ್ಲಿ ನೀರು ತುಂಬಿಕೊಂಡಿದೆ
ಗಾಯ ಎರಡು ಕಡೆಯೂ ಆಗಿದೆ
ನಾನಿನ್ನೂ ಮನಸ್ಸಿನ ಗಲಭೆಯನ್ನು ಸಂಭಾಲಿಸುತಿರುವೆ
ನೀನು ಅಂದಿನಂತೆ ಈ ಮನೆಯನ್ನು ಪ್ರವೇಶಿಸಿದೆ
ಖುಷಿಯಿಂದ ಕುಣಿಯುತ್ತಿರುವ ಮನಸ್ಸಿಗೂ ತಳಮಳ
ಈ ರಾತ್ರಿ ಕಳೆದರೆ ಬೆಳಗೆ ಏನು ?
ನಾಳೆ ಮತ್ತೆ ಜೊತೆ ಇರ್ತಿಯಾ?
ಇರದಿದ್ದರೂ ಮತ್ತೆ ಮರುಳಿ ಬರುತ್ತೀಯ ?
Comentarios