ಅಂದು ತನ್ನ 2ನೇ ವರ್ಷದ ಇಂಜಿನಿಯರಿಂಗನ್ನು ಮುಗಿಸಿ, ಊರಿಗೆ ರಜೆಗೆಂದು ಮರಳಲು ಎಲ್ಲ ಸಿದ್ಧತೆಯನ್ನು ಮಾಡುತ್ತಾ ಅವನ ಆಪ್ತಗೆಳತಿಗೂ ಒಮ್ಮೆ ವಿಷಯ ತಿಳಿಸಬೇಕೆಂದು ಯೋಚಿಸಿದ. ಒಳ್ಳೆಯ ಕೆಲಸಕ್ಕೆ ತಡವೇಕೆ ಎಂಬಂತೆ ವರ್ಷಾಳಿಗೆ ಕರೆ ಮಾಡಿದ. ದಿಢೀರ್ ನಿಶ್ಚಯದ ಕುರಿತು ತಿಳಿಸುತ್ತಾ ಹೊರಡಲು ತಯಾರಾಗುತ್ತಿದ್ದ. ಆದರೆ ಅಭಿಯ ಈ ನಿರ್ಧಾರವನ್ನು ಕೇಳಿದ ಆಕೆಗೆ ಏನೋ ಒಂಥರ ಮನಸ್ಸಲ್ಲಿ ಅಂಜಿಕೆ. ಅಂದು ಏನೇ ಆಗಲಿ ಅವನನ್ನು ಭೇಟಿ ಮಾಡಿ ಕೊನೆಯದಾಗಿ ಬೀಳ್ಕೊಡಬೇಕೆಂದು ಬಯಸಿದಳು.
ಹೇಗಿದ್ದರು ಅಭಿಯು ಊರಿಗೆ ಹೋಗಲು ಪ್ರತಿ ಬಾರಿಯಂತೆ ಯಶವಂತಪುರದಿಂದ ರೈಲಿನಲ್ಲಿ ಹೋಗುತ್ತಾನೆ. ಹೀಗಾಗಿ ತಾನು ಅವನ ಜೊತೆ ಅಲ್ಲಿಯ ವರೆಗೆ ತೆರಳಿ ಬಿಟ್ಟು ಬರೋಣವೆಂದು ಅಂದುಕೊಂಡಳು. ಹೀಗಾಗಿ ಮರಳಿ ಕರೆ ಮಾಡಿ " ನಾನು ನಿನ್ನ ಜೊತೆಗೆ ಸ್ಟೇಷನ್ ವರ್ಗು ಬರ್ತೀನಿ ಕಣೋ, ಪ್ಲೀಸ್" ಎಂದಳು. " ನೀನು ಹೇಳೋದು ನೋಡಿದರೆ ನಾನು ನಿಂಗೆ ಇನ್ನ್ಯಾವತ್ತು ಸಿಗಲ್ಲ ಅನ್ನೊ ತರ ಇದೆ. ನಾನೆಲ್ಲೂ ಹೋಗಲ್ಲ ಕಾಲೇಜು ಶುರು ಆದಾಗ ವಾಪಸ್ಸು ಬರ್ತೀನಿ. ಈವಾಗ ನೀನು ಬರೋದು ಬೇಡ ಸುಮ್ನೆ ಮನೇಲಿ ಇರು" ಎಂಬ ಉತ್ತರ ಬಂತು. ಆದರೂ ಪ್ರತಿಸಲದಂತೆ ಈ ಸಲ ಕೂಡ ಅವಳ ಹಠವೇ ಗೆದ್ದಿತು. ಸಂಜೆ 5ಗಂಟೆಗೆ ರೈಲು ಇರುವುದಾಗಿಯೂ, 3 ಗಂಟೆ ಹಾಗೆ ಬಂದು ಏನಾದರು ತಿಂದು ಸ್ವಲ್ಪ ಹರಟೆ ಹೊಡೆಯಬೇಕಾಗಿಯೂ, ಆದೇಶವಾಯಿತು.
ಅಂತೂ ಅವನನ್ನು ಭೇಟಿ ಮಾಡಲು ಹೊರಟ ವರ್ಷಾಳಿಗೆ, ಹೀಗೆ ಮನಸ್ಸಿನಲ್ಲಿ ಯೋಚನೆಗಳು ಮನೆ ಮಾಡಿದವು. 'ಹೇಗಿದ್ದರು ಅವನು ರಜೆ ಮುಗಿಸಿ ಮರಳಿ ಬರುತ್ತಾನೆ. ನಾನು ಯಾಕೆ ಇಷ್ಟೊಂದು ಗಡಿಬಿಡಿಯಲ್ಲಿ ಕಸಿವಿಸಿ ಮಾಡಿಸಿ ಹೊರಟೆ?' ಪರೀಕ್ಷೆ ಸರಿಯಾಗಿ ಬರೆದಿಲ್ಲವೆಂಬ ಆತಂಕದಲ್ಲಿ ಹೀಗೆ ಮಾಡಿರಬೇಕೆಂದು ಸುಮ್ಮನಾದಳು.
ಹೇಳಿದಂತೆ 3 ಗಂಟೆಗೆ ಸರಿಯಾಗಿ ಇಬ್ಬರೂ ಕಾಲೇಜಿನ ಬಳಿ ಭೇಟಿಯಾದರು. ಭೇಟಿಯಾದ ತಪ್ಪಿಗೆ ಇಬ್ಬರೂ ಜ್ಯೂಸ್ ಕುಡಿದರು. ವರ್ಷಾಳ ಆಶಯದಂತೆ. ನಂತರ ಹರಟೆ ಹೊಡೆಯುತ್ತಾ ಈ ಸಮಯದಲ್ಲಿ ಹೊರಟರೆ ಸರಿಯಾದ ಸಮಯಕ್ಕೆ ಅಲ್ಲಿ ಇರುತ್ತೇವೆ ಎನ್ನುತ್ತಾ ಮೆಟ್ರೊ ಹತ್ತಲು ತಯಾರಾದರು. ಅಲ್ಲಿಯೊ, ಕುಳಿತುಕೊಳ್ಳಲು ಜಾಗವೇ ಇರಲಿಲ್ಲ. ನಂತರ ಒಂದು ಸೀಟು ಖಾಲಿಯಾಗಿ, "ಹಿರಿಯ ನಾಗರಿಕರಿಗೆ ಜಾಗ ಮಾಡಿ ಕೊಡಬೇಕು ಅಲ್ಲವೇ. ಕುಳಿತುಕೊ" ಎನ್ನುತ್ತಾ ವರ್ಷಾಳಿಗೆ ಕುಳಿತುಕೊಳ್ಳಲು ಹೇಳಿ ತನ್ನ ಬ್ಯಾಗ್ ಅನ್ನು ಕೊಟ್ಟ. ಈ ಅಪಹಾಸ್ಯವನ್ನು ಕೇಳಿಯೂ ಕೇಳದಂತೆ ನಟಿಸುತ್ತಾ ಕುಳಿತು ಎತ್ತಲೋ ತನ್ನ ದೃಷ್ಟಿ ಹಾಯಿಸಿದಳು.
ಸ್ಟೇಷನ್ನಿಗೆ ಬಂದು ಟಿಕೆಟನ್ನು ಸಹ ಪಡೆದು ಇನ್ನೇನು ಹೊರಡಲು ತಯಾರಾದ ಅಭಿ. ತುಸು ಮಾತನಾಡಿ ರೈಲು ಹೊರಡುವ ಮುಂಚೆ ಇಬ್ಬರು ಟಾಟಾ ಮಾಡಿದರು. ಎಲ್ಲವೂ ಸರಾಗವಾಗಿ ಆಯ್ತು ಎಂದು ಖುಷಿಯಿಂದ ಮನೆಗೆ ಬಂದಳು ವರ್ಷಾ.
ಮರುದಿನ ಬೆಳಗ್ಗೆ ವರ್ಷಾಳ ಮೊಬೈಲ್ ಗೆ ಅಭಿಯಿಂದ ಕರೆ ಬಂದಿತು. ಉತ್ಸಾಹದಿಂದ ಉತ್ತರಿಸಿದ ವರ್ಷಾಳಿಗೆ ಆಘಾತ ಕಾದಿತ್ತು. ಅಭಿಯ ಅಣ್ಣ" ಅಭಿ ನಿನ್ನೆ ರಾತ್ರಿ ರೈಲಿಂದ ಇಳಿದು ಮನೆಗೆ ಬರಲು ಬಸ್ ಹತ್ತಿದ್ದ. ಆದರೆ ಆ ಬಸ್ ದಾರಿಯಲ್ಲಿ accident ಆಗಿ ಇವನು ತೀರಿಹೋದ" ಎಂದು ಬರುತ್ತಿದ್ದ ಕಣ್ಣೀರನ್ನು ತಡೆದುಕೊಳ್ಳುತ್ತ ಉಬ್ಬಿದ ಗಂಟಲಲ್ಲಿ ಹೇಳಿ ಮುಗಿಸಿದರು.
ಆ ಸಮಯದಲ್ಲಿ ಅವಳಿಗೆ ತಿಳಿಯಿತು ನಿನ್ನೆ ಏಕೆ ಅವನನ್ನು ಭೇಟಿ ಮಾಡುವ ಕಾತರ ಇತ್ತು ಎಂದು. ಅವನ ಮಾತು ಕಿವಿಯಲ್ಲಿ ಕೇಳಿಸುತ್ತಲೇ ಇತ್ತು "ನೀನು ಹೇಳೋದು ನೋಡಿದರೆ ನಾನು ನಿಂಗೆ ಇನ್ನ್ಯಾವತ್ತು ಸಿಗಲ್ಲ ಅನ್ನೊ ತರ ಇದೆ. ನಾನೆಲ್ಲೂ ಹೋಗಲ್ಲ ಕಾಲೇಜು ಶುರು ಆದಾಗ ವಾಪಸ್ಸು ಬರ್ತೀನಿ" ಎಂದು ಪ್ರತಿಧ್ವನಿಸುತ್ತಿತ್ತು.
Comments