top of page
Chiranjeeth U S

ಮಳೆಯೆಂಬ ಮಾಯೆ…!!!

ಮಳೆಗಾಲದ ಹಿತವಾದ ಚಳಿಗೊಂದು ದಪ್ಪ ಕಂಬಳಿ ಹೊದೆದು ಸೊಂಪು ನಿದ್ದೆ ಕಾಣೊಣವೆಂಬ ಹೆಬ್ಬಯಕೆ ಹೊಂದಿದ್ದ ಬೆಂಗಳೂರಿಗರ ಕನಸಿಗೆ ತಣ್ಣೀರೆರಚಿದಂತೆ ಒಂದೆರಡು ದಿನಗಳಿಂದ ಒಂದು ಕ್ಷಣ ಅತ್ತ ಇತ್ತ ಬಿಡದೆ ಜಡಿ ಮಳೆ ಸುರಿಯುತ್ತಿದೆ.ಮಾಗಡಿ,ಪೀಣ್ಯ,ಜಲಹಳ್ಳಿ,ಸುಮನಹಳ್ಳಿ,ಕೆಂಗೆರಿ ಕಡೆಯ ರಸ್ತೆಗಳಂತು ಅಕ್ಷರಷಃ ಅಕಾಲಿಕ ಮಳೆಗೆ ಸತ್ತ ಹಲವರ ವೀಕೆಂಡಿನ ಕನಸುಗಳನ್ನು ಹುಗಿಯಲೆಂದೊ ಎಂಬಂತೆ ಬಾಯ್ತೆರೆದು ನಿಂತಿವೆ.ಅವುಗಳಲ್ಲಿ ತುಂಬಿ ನಿಂತ ಕೆಸರಿನಲ್ಲಿ ಕಾಲಿಟ್ಟಾಗ ಪಚಗುಟ್ಟುವಂತೆ ಎಲ್ಲ ನಿತ್ರಾಣ ಹೃದಯಗಳು ಮೌನ ಮರೆತು ಮತ್ತೆ ಕಚಪಚನೆ ಎನೆನೊ ಯೋಚಿಸುವ ಕಾಲದಲ್ಲಿ ಪ್ರೇಮ ಸತ್ತ ಪ್ರೇಮಿಗಳಲ್ಲಿ ,ಆಸೆ ಸತ್ತ ಅನಾಮಿಕರಲ್ಲೆಲ್ಲ ಬೆಚ್ಚಗೆ ಮಲಗಿದ್ದ ಮೌನಕ್ಕೆ ಕಸಿವಿಸಿಯಾಗತೊಡಗಿತು.ಮಳೆಯೇ ಹಾಗೆ ಒಂಟಿಯಾಗಿ ಬದುಕುತ್ತಿರುವ ಸುಖ ಜೀವಿಗಳಿಗೆಲ್ಲ ಜಂಟಿಯಾಗುವೆಡೆಗೆ ಮುಖ ಮಾಡಿಸಿ ಬಿಡುತ್ತದೆ.ಮೂಖ ಮನಗಳಲ್ಲಿ ಮಧುರ ರಾಗ ಮೊಳಗಿಸುತ್ತದೆ.


ಧೂಳು ಕೂತು ಕಂದು ಬಳಿದಂತೆ ನಿಂತ ಎಲೆಗಳ ಮೇಲೆಲ್ಲ ಸುರಿದು ಮಾರ್ಣಮಿಗೊ,ಪೌರ್ಣಮಿಗೊ ಮಿಂದ ಹೆಂಗಳೆಯಂತೆ ಸುತ್ತಲಿನ ನಿಸರ್ಗವೆಲ್ಲ ನಳನಳಿಸುತ್ತಿದ್ದರೆ, ಅನುದಿನದ ಜಟಿಲ ಜಂಜಟಗಳಿಂದ ಕಂದು-ಕುಂದಿರುವ ಮನಗಳೆಲ್ಲ ಮತ್ತೆ ಚೈತನ್ಯ ತುಂಬಿಕೊಂಡು ದಿವ್ಯ ಚೇತನಗಳಂತೆ ರಸ್ತೆಯ ತುಂಬೆಲ್ಲ ಪ್ಲಾಸ್ಟಿಕ್ ಹಿಡಿಯ ಕೊಡೆಗಳನ್ನು ಹೊತ್ತು ಯಾವಾಗ ಮನೆ ಸೇರುತ್ತೇನೋ ಬಿಸಿಬಿಸಿಯಾದ ಚಹಾ ಹೀರುತ್ತೇನೊ ಹೆಂಡತಿಯ ಮುಖ ಕಂಡು ಬಿಸಿನಗೆ ಬೀರುತ್ತೇನೊ ಎಂದು ಹಾತೊರೆಯುತ್ತಿದ್ದರೆ, ಇನ್ನೊಂದಿಷ್ಟು ಜನ ಚಳಿಗೆಂದೇ ಸೃಷ್ಟಿಸಿದ್ದಾರೋ ಎಂಬಂತಿರುವ ಸಿಗರೇಟು ಚಹಾ ಜೋಡಿ ಸಿಗಬಹುದಾದ ಗೂಡಂಗಡಿಗಳನ್ನು ಹುಡುಕುತ್ತಿದ್ದವು ಒಟ್ಟಾರೆ ಅವರವರ ಮಿತಿಯಲ್ಲಿ ರಲ್ಲರು ಸಖಿ ಬಯಸುವವರೆ.


ಹೀಗೆ ಒಂದೆರಡು ದಿನಗಳ ಹಿಂದೆ ಜಯನಗರದಿಂದ ಕೆ.ಆರ್ ಮಾರ್ಕೆಟ್ ಬಸ್ಸತ್ತಿ ಬಂದ ನಾನು ಬಸ್ಸಿನ ಬಾಗಿಲಿನಿಂದ ಜನಸ್ತೋಮದ ಬಿರುಸಿಗೆ ಸಿಕ್ಕಿ ಕೆಳಗಿಳಿದೆ, ಹಾಗೆ ಒಮ್ಮೆ ಊರಿನ ಹೊಳೆಯಲ್ಲೊ ಹಳ್ಳದಲ್ಲೊ ಇಳಿದೆನೆನೋ ಎಂಬ ಭಾಸವಾಯಿತು ಅಷ್ಟು ನೀರು ಎಲ್ಲಿಂದಲೋ ಹರಿದು ಬಂದು ಅಲ್ಲಿ ನಿಂತಿತ್ತು. ನೀರೆಂದರೆ ಬರಿ ನೀರಲ್ಲ ಮಳೆಗೆ ಮರುಕಳಿಸಿದ ಸಾವಿರಾರು ನೆನಪುಗಳೆಣಿಸಿ ಕಣ್ಣೀರು ತುಂಬಿಕೊಂಡ ಕಣ್ಣುಗಳ ಬಿಸಿ ಹನಿಗಳು, ರಸ್ತೆ ಬದಿಯಲ್ಲಿ ಶೂ ,ಪುಸ್ತಕ ,ಬಟ್ಟೆ ,ತರಕಾರಿ ಮಾರುವವರಿಗೆ ಈಗಾಗಲೇ ರಸ್ತೆ ತುಂಬಿ ತಮ್ಮ ಅಂಗಡಿಗಳತ್ತ ಬರುತ್ತಿರುವ ಕೊಳಚೆ ನೀರನ್ನು ಕಂಡು ಚಳಿಯಲ್ಲೂ ಕಿತ್ತು ಬರುತ್ತಿರುವ ಬೆವರು, ದೇವಸ್ಥಾನಗಳಲ್ಲಿ ಒಂದು ಕಡೆ ತೀರ್ಥವೆಂದು ಸ್ವೀಕರಿಸಿ ಇನ್ನೊಂದೆಡೆ ಹಿಂದಿನ ಚರಂಡಿ ಸೇರುತ್ತಿರುವ ಅಭಿಷೇಕದ ಪುಣ್ಯಜಲ, ಇನ್ನು ಎಷ್ಟೆಷ್ಟೋ ಭಾವನೆಗಳು-ನಂಬಿಕೆಗಳು ಆ ನೀರಿನಲ್ಲಿ ಬೆರೆತಿದ್ದವು.


ದಿನವೂ ಅಲ್ಲಿ ಇಳಿದವನು ಬೇರೆ ಬಸ್ ಹುಡುಕುತ್ತ ಬರಬರನೆ ಗಡಿಬಿಡಿಯಲ್ಲಿ ನಡೆದು ಬಿಡುತ್ತಿದ್ದ ನನಗೆ ಅಂದು ಮಾತ್ರ ಇನ್ನೊಂದು ಅಡಿ ಇಡುವಷ್ಟರಲ್ಲಿ ಯಾರೋ ಕಾಲೆನ್ನಿಡಿದು ಇಲ್ಲೇ ನಿಲ್ಲೆಂದು ಎಳೆದಂತಾಯಿತು. ಪ್ರತಿ ಹೆಜ್ಜೆಯೂ ಒಂದಕ್ಕಿಂತ ಒಂದು ಭಾರವಾಗಿ ಕೊನೆಗೊಂದು ಕ್ಷಣ ನಿಂತೇ ಬಿಟ್ಟೆ! ಹೆಚ್ಚು ಕಡಿಮೆ ಆ ವಾತಾವರಣದಲ್ಲಿ ಇದ್ದವರೆಲ್ಲ ನನ್ನ ಪಾಲಿಗೆ ಅನಾಮಿಕರೆ. ವ್ಯಾಪಾರಿಗಳ ಗಿಜಿ-ಗಿಜಿಯ ಹೊರತು ಮಳೆಯ ಸದ್ದಿಗೆ ಎಲ್ಲ ನೀರವ ಮೌನವನ್ನಪ್ಪಿದಂತಾಗಿತ್ತು. ಕೆಲ ಸಮಯದಲ್ಲೆ ಆ ವಿಶಾಲ ಶಾಂತತೆಯನ್ನೆಲ್ಲ ಮೀಟಿ ಅಲ್ಲೊಂದು ಹಾಹಾಕಾರವಿದ್ದಂತೆ ಭಾಸವಾಗ ತೊಡಗಿತು .ಪಕ್ಕದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳಿಗೆ ಊಟ ತೆಗೆದುಕೊಂಡು ಹೋಗಲು ಬಂದ ಮನೆಯವರಿಗೆ, ಸರಿಯಾದ ಸಮಯಕ್ಕೆ ಬಿಸಿಬಿಸಿಯಾದ ಊಟವನ್ನು ಒಯ್ಯುತ್ತೇನೋ ಇಲ್ಲವೋ ಎಂಬುದೊಂದೆಡೆಯಾದರೆ ಇಂದಿನ ವಾತಾವರಣವನ್ನು ನಂಬಿ ಮಾಡಿಟ್ಟ ಬಿಸಿ ಬಿಸಿ ಆಹಾರವನ್ನೆಲ್ಲ ಇಂದೆ ಖಾಲಿ ಮಾಡುತ್ತೇನೊ ಇಲ್ಲವೊ ಎಂಬ ವ್ಯಾಪಾರಿಗಳ ಸಂದೇಹ ಇವೆಲ್ಲವೂ ಸುತ್ತಲಿನವರ ಕಣ್ಣುಗಳಲ್ಲಿ ಕೆತ್ತಿಟ್ಟಂತೆ ಕಾಣುತ್ತಿತ್ತು. ಅದೇ ನೊಡಿ ಈ ಭಾವನೆಗಳು ಬಲೂನಿನೊಳಗೆ ತುಂಬಿಟ್ಟ ಗಾಳಿಯಂತೆ, ಯಾವುದಾದರೂ ಒಂದು ದಾರಿಯಿಂದ ಹೊರ ಉಸುರುತ್ತಲೆ ಇರುತ್ತವೆ ,ಒಂದು ದಿನ ಗಾಳಿಯೆಲ್ಲ ಹೊಗಿ ಮತ್ತೆ ಬಲೂನು ಚಪ್ಪಟೆಯಾದಾಗಲೆ ನಮಗದರ ಅರಿವಾಗುವುದು. ಈ ಕಣ್ಣೆಂಬ ಕಡಲೇ ಸಾಕು ಕೋಟಿ ಕಷ್ಟಗಳನ್ನೂ ಕ್ಷಣದಲ್ಲಿ ನೀರಾಗಿ ಒಸರಿಸಿಬಿಡುತ್ತದೆ, ಅತಿ ನೋವಿಗೂ ಸೋರುತ್ತದೆ ಹಿತ-ಮಿತ-ಖುಷಿಗಳಿಗೂ ಸೋರುತ್ತದೆ.ಹಾಗಾಗಿಯೆ ನನಗೆ ಜಗತ್ತನಲ್ಲಿ ಕಣ್ಣೀರಿಡಲಾಗದ ಕಾಯಿಲೆ ಒಮ್ಮೊಮ್ಮೆ ಕ್ಯಾನ್ಸರ್ ಗಿಂತ ಮಾರಕವಾಗಿ ಮರಣಾಂತಿಕವಾಗಿ ಕಾಣುತ್ತದೆ ನೋಡಿ .


ಅಷ್ಟರಲ್ಲಾಗಲೆ ನನ್ನ ನಿಲ್ದಾಣಕ್ಕೆ ತಲುಪಿಸಬಹುದಾದಂತಹ ಕೆ.ಬಿ.ಎಸ್ ಬಸ್ಸು ನನ್ನ ಮುಂದೆ ಬಂದು ನಿಂತಿತು. ಕೊಡೆಯಿಲ್ಲದೆ ಗೊಣಬೆ ಹುಲ್ಲಿನಂತೆ ನೆಂದು ನಿಂತಿದ್ದ ನಾನು ಬಸ್ಸಿನೆಡೆಗೆ ಅಡಿ ಇಟ್ಟೆಯಷ್ಟೆ. ಹೋಗಿ ಬಾ ಮಗನೇ,ಎಂಬಂತೆ ಬೀಸಿದ ಗಾಳಿಗೆ ಅರಳಿಮರ ತೂಗಿ, ತನ್ನೆಲೆಯ ಮೇಲಿದ್ದ ದೊಡ್ಡ ದೊಡ್ಡ ಹನಿಗಳನ್ನೆಲ್ಲ ನನ್ನ ಮೇಲೆ ದೊಪದೊಪನೆ ಉದುರಿಸಿ ಬಿಳ್ಕೊಟ್ಟಿತು.


ಮೊಬೈಲ್ ಎಂಬುದೇ ಒಂದು ದೊಡ್ಡ ಗೀಳು ನೋಡಿ ಎಲ್ಲಿ ಹೊರತೆಗೆದಿದ್ದರೆ ನನ್ನ ಮೇಲೆ ಹಗೆ ತೀರಿಸಿಕೊಂಡು ಬಿಡುತ್ತದೊ ಎಂಬಂತೆ ಆಗಾಗ ಹೊರತೆಗೆಯುತ್ತಲೇ ಇರುವುದು ಚಾಡಿಯಾಗಿ ಹೋಗಿದೆ, ಹಾಗೆ ಬಸ್ಸತ್ತಿ ಮೊಬೈಲ್ ಹೊರ ತೆಗೆದವನು ಯಾರದೋ ಸ್ಟೇಟಸ್ ಓಪನ್ ಮಾಡಿದೆ “ಮುಂಗಾರು ಮಳೆಯೆ… ಏನು ನಿನ್ನ ಹನಿಗಳ ಲೀಲೆ…” ಹಾಡಿಗೆ ಬೆಂಗಳೂರಿನ ಮಳೆಯ ಚಿತ್ರವೊಂದನ್ನು ಕೂಡಿಸಿ ಹಾಕಿದ್ದರು. ಅರೆ! ಹೌದಲ್ಲ, ಭಟ್ಟರು ಹೇಳಿರುವ ಒಂದೊಂದು ಸಾಲು ಎಷ್ಟು ಸತ್ಯ. ಮಳೆಹನಿಗಳಿಗೆ ಮರದ ಬಾಯಿಯೆನಾದರೂ ಇದ್ದಿದ್ದರೆ ಅವು ನಮ್ಮೆದೆಯಲ್ಲಿ ನುಡಿಯುವ ಸಾವಿರಾರು ಮಾತುಗಳಿಗೆ ಅವುಗಳ ಬಾಯೇ ಒಡೆದು ಹೋಗುತ್ತಿತ್ತೇನೊ.


ವಿದ್ಯಾರ್ಥಿಗಳ,ಕೆಲಸಕ್ಕೆ ಹೋಗುವವರ ದೃಷ್ಟಿಯಲ್ಲಿ ನೋಡಿದರೆ ಮಳೆಯಿಂದ ಒಂದು ಬಲು ಕ್ಲಿಷ್ಟ ತೊಂದರೆಯಿದೆ.ʼದೊಡ್ಡ,ದೊಡ್ಡ ಗಾಡಿಗಳೊಳಗೆ ಕುಳಿತ ಮೂಡರು ಬೇಕಾಬಿಟ್ಟಿ ವೇಗದಲ್ಲಿ ಬಂದು ಕೆಸರೆರಚಿ ಹೋಗುವುದುʼ. ದಿನದ ಹಲವಾರು ಕೆಲಸಗಳ ಗೊಂದಲಗಳಿದ್ದರೂ ಸಹಿತ,ಅಮ್ಮ ತನ್ನ ಮುದ್ದಿನ ಮಗ ಚಂದ ಕಾಣಲೆಂದು ತೊಳೆದು,ಮಳೆಯಿದ್ದರೂ ಹರಸಾಹಸ ಮಾಡಿ ಹೇಗೋ ಒಣಗಿಸಿ,ಅದೇ ಹಳೆ ಹಾಳು ಇಸ್ತ್ರಿ ಪೆಟ್ಟಿಗೆಯನ್ನು ಮೂರು ನಾಲ್ಕು ಬಾರಿ ತಟ್ಟಿ ಗರಿಗರಿಯಾಗಿ ಇಸ್ತ್ರಿ ಮಾಡಿಕೊಟ್ಟ ಪ್ಯಾಂಟು-ಶರ್ಟುಗಳ ಮೇಲೆ ಜನಕಾಣದ ಕುರುಡರಂತೆ ಕೆಸರೆರಚಿ ಹೋಗುವುದು ಸ್ವತಃ ಮಳೆಗೂ ತೊಳೆಯಲಾಗದ ಪಾಪವೇ ಸರಿ.


ಕೊನೆಗೂ ನನ್ನ ಸ್ಟಾಪು ತಲುಪಿದ ನನಗೆ ವಿಚಿತ್ರವೆನ್ನಬಹುದಾದರೂ ಮಾನಸಿಕವಾಗಿ ಬಹು ಸಾಮಾನ್ಯ ದೃಷ್ಯವೊಂದನ್ನು ಕಾಣಲು ಸಿಕ್ಕಿತು. ವ್ಯಕ್ತಿಯೊಬ್ಬ ಟೌನ್ ಹಾಲಿನದುರಿನ ರಸ್ತೆ ಡಿವೈಡರಿನ ಪಕ್ಕದಲ್ಲಿ ನಿಂತು, ಆಕಾಶಕ್ಕೆ ಮುಖ ಮಾಡಿ ಕೈಯಗಲಿಸಿ ನಿಂತಿದ್ದ. ಒಂದು ರೀತಿಯಲ್ಲಿ ಮದಿರೆಯ ಮತ್ತಿಗೆ ಸಿಲುಕಿ ಮರುಳನಾದಂತೆ ಕಂಡರು. ಆ ಸನ್ನಿವೇಶದಲ್ಲಿ ಆತ ತನ್ನ ಆತ್ಮವನ್ನು ನಿನಗೆ ಅರ್ಪಿಸಿ ಬಿಡುತ್ತೇನೆ ತಾಯೆ ನರಗಳಾದಿಯಾಗಿ ಹಾದು ಎನ್ನಾತ್ಮದಲ್ಲಿ ಇಳಿದು ,ಶುದ್ಧಾತ್ಮ ಸುಜನನನ್ನಾಗಿಸಿ ಬಿಡೆಂದು ಹಂಬಲಿಸಿ ನಿಂತಂತೆನಿಸುತ್ತಿತ್ತು. ಇನ್ನೇನು ಕೆಲವೇ ಕ್ಷಣಗಳಲ್ಲಿ ಅವನ ಕಾಲು ಬೆರಳುಗಳೆಲ್ಲ ಹರಿದು ಬೇರುಗಳು ಹೊರಬಂದು, ಕಾಂಕ್ರೀಟ್ ರಸ್ತೆ ಒಡೆದು ಭೂಮಿ ಹೊಕ್ಕು, ದೇಹ ಅಂಬರದೆಡೆಗೆ ಬೆಳೆದು ಬೃಹದಾಕಾರವಾದ ಮರವಾಗಿ ನಿಂತು ಬಿಡುತ್ತಾನೆನೊ ಎಂದೆನಿಸುತ್ತಿತ್ತು .ಎಕೆಂದರೆ, ಆಗಲಾದರೂ ಮೆಟ್ರೋ ಎಂಬ ಮಂತ್ರಜಾಲಕ್ಕೆ ಮರಣವನ್ನಪ್ಪಿದ ಸಾವಿರಾರು ಮರಗಳು ಮನದುಂಬಿ ಉಸಿರಾಡುತ್ತಿದ್ದವೇನೊ…..

34 views

Comentários


bottom of page